ತಾಳಗತಿ ವೈಪರೀತ್ಯ, ಗುಂಡಿಗೆಯ

	ಗುಂಡಿಗೆ ಮಿಡಿತ, ಮಾಮೂಲು ಸ್ಥಿತಿಯಲ್ಲಿ ಇರುವಾಗ ಕಂಡುಬರುವಂತೆ ಕ್ಲುಪ್ತರೀತಿಯ (ರೆಗ್ಯುಲರ್) ತಾಳಗತಿ ಇರದೆ ವ್ಯತ್ಯಾಸಗೊಂಡಿರುವ ಸ್ಥಿತಿ (ಕಾರ್ಡಿಯಕ್ ಅರಿತ್ಮಿಯಾಸ್). ಗುಂಡಿಗೆಗೆ ಸ್ವಯಂ ತಾಳಸ್ಥಿತಿ (ಆಟೋಮ್ಯಾಟಿಕ್ ರಿತ್ಮಿಸಿಟಿ) ಉಂಟು. ಅಂತೆಯೇ ಅದಕ್ಕೆ ಚೋದನೆಯನ್ನು ಸಂವಹನಿಸುವ (ಕಂಡಕ್ಟ್) ಸಾಮಥ್ರ್ಯವೂ ಇದೆ. ಆದರೆ ಚೋದನೆಯನ್ನು ಉದ್ಭವಿಸುವುದೂ ಅದನ್ನು ಸಂವಹನಿಸುವುದೂ ಗುಂಡಿಗೆಯಲ್ಲಿ ಅವುಗಳಿಗಾಗಿ ಮೀಸಲಾಗಿರುವ ವಿಶಿಷ್ಟ ಭಾಗಗಳ ಕ್ರಿಯೆ. ಚೋದನೆ ಮಿನಿಟಿಗೆ ಸುಮಾರು 70 ಸಾರಿ ಬಲಹೃತ್ಕರ್ಣದ ಮೇಲು ಭಾಗದಲ್ಲಿ ರೂಪುಗೊಂಡಿರುವ ಸೈನೊಏಟ್ರಿಯಲ್ ಗಂಟು ಎಂಬ ಸ್ಥಳದಲ್ಲಿ ಉದ್ಭವಿಸುತ್ತದೆ. ಹೃತ್ಕರ್ಣಗಳ ಮಾಂಸ ತಂತುಗಳಲ್ಲಿ ಸೆಕೆಂಡಿಗೆ ಒಂದು ಮೀಟರಿನಷ್ಟು ವೇಗದಲ್ಲಿ ಮುಂದುವರಿದು ಎರಡು ಹೃತ್ಕರ್ಣಗಳ ಪೂರ್ತ ಹರಡಿಕೊಳ್ಳುತ್ತದೆ. ಪರಿಣಾಮ ಎರಡೂ ಹೃತ್ಕರ್ಣಗಳ ಏಕಕಾಲಿಕ ಮಿಡಿತ. ಬಲಹೃತ್ಕರ್ಣದ ಕೆಳಗಡೆ ಒಂದು ಭಾಗದಲ್ಲಿ ಹೃತ್ಕರ್ಣ-ಹೃತ್ಕುಕ್ಷಿಗಂಟು (ಏಟ್ರಿಯೋವೆನ್ ಟ್ರಿಕ್ಯುಲರ್‍ನೋಡ್) ಎಂಬುದು ರೂಪುಗೊಂಡಿದೆ. ಚೋದನೆ ಇದನ್ನು ತಲಪಿ ಇದರ ಮೂಲಕ ಸಾಗುವ ವೇಗದ ದರ ಬಲುಕಡಿಮೆ. ಸೆಕೆಂಡಿಗೆ 0.1 ಮೀಟರಿನಷ್ಟು ಮಾತ್ರ. ಇಲ್ಲಿಂದ ಮುಂದೆ ಚೋದನೆ ಸಾಗುವುದು ಹೃತ್ಕರ್ಣ-ಹೃತ್ಕುಕ್ಷಿ ಕಟ್ಟು ಅಥವಾ ಹಿಸ್- ತವಾರ ಕಟ್ಟು ಎಂಬ ಹೃನ್ಮಾಂಸತಂತುಗಳ ಕಟ್ಟು ಹಾಗೂ ಆ ಕಟ್ಟಿನ ಎಡಬಲಶಾಖೆಗಳ ಮೂಲಕ. ಇಲ್ಲಿ ಸಂವಹನೆಯ ವೇಗದ ದರ ಮಿನಿಟಿಗೆ 1 ರಿಂದ 4 ಮೀಟರುಗಳಷ್ಟು. ಚೋದನೆ ಹೃತ್ಕಕ್ಷಿ ಮಾಂಸಖಂಡಗಳನ್ನು ಈ ಮಾರ್ಗವಾಗಿ ತಲಪಿ ಅವುಗಳಲ್ಲಿ ಸೆಕೆಂಡಿಗೆ 0.3 — 4 ಮೀಟರುಗಳಷ್ಟು. ವೇಗದಲ್ಲಿ ಪಸರಿಸಿಕೊಳ್ಳುತ್ತದೆ. ಇದರ ಫಲ ಎರಡೂ ಹೃತ್ಕುಕ್ಷಿಗಳು ಹೆಚ್ಚು ಕಡಿಮೆ ಏಕಕಾಲಿಕವಾಗಿ ಮಿಡಿಯುವುದು. ಹೃತ್ಕರ್ಣಮಿಡಿತವಾದ ಸುಮಾರು 0.1 ಸೆಕೆಂಡಿನ ಬಳಿಕ ಹೃತ್ಕುಕ್ಷಿಮಿಡಿತ ಕಂಡು ಬರಲು ಕಾರಣ ಕಟ್ಟಿನಲ್ಲಿ ಚೋದನೆ ನಿಧಾನಗತಿಯಿಂದ ಸಾಗುವುದೇ. ಸೈನೊಏಟ್ರಿಯಲ್ ಗಂಟಿನಲ್ಲಿ ಉದ್ಭವವಾದ ಚೋದನೆಯಿಂದಲೇ ಹೀಗೆ ಹೃತ್ಕುಕ್ಷಿಮಿಡಿತ ಅರ್ಥಾತ್ ಗುಂಡಿಗೆಮಿಡಿತ ಏರ್ಪಡುವುದರಿಂದ ಈ ಮಿಡಿತದ ದರ ಹಾಗೂ ತಾಳಗತಿ ಸೈನೊಏಟ್ರಿಯಲ್ ಗಂಟನ್ನೇ ಅವಲಂಬಿಸಿವೆ. ಆದ್ದರಿಂದ ಈ ಕಟ್ಟನ್ನು ಗತಿರೂಪಕ, ಗತಿಕಾರಕ (ಪೇಸ್‍ಮೇಕರ್) ಎಂದಿದೆ. ಸೈನೊಏಟ್ರಿಯಲ್ ಗಂಟಿನಲ್ಲಿ ಚೋದನೆಯ ಉದ್ಭವವೇಗದರವನ್ನೂ ಹೃತ್ಕರ್ಣ-ಹೃತ್ಕುಕ್ಷಿಯಲ್ಲಿ ಚೋದನೆಯ ಸಂವಹನೆಯ ವೇಗವನ್ನೂ ಅನುಕಂಪೀ (ಸಿಂಪಥೆಟಿಕ್) ನರಪ್ರಚೋದನೆಯಿಂದ ಹೆಚ್ಚಿಸಬಹುದಾಗಿದೆ. ಹಾಗೆಯೇ ಈ ಭಾಗದ ಸಹಾನುಕಂಪೀ (ಪ್ಯಾರಸಿಂಪಥೆಟಿಕ್) ನರವಾದ ವೇಗಸ್ಸಿನ ಪ್ರಚೋದನೆಯಿಂದ ಇವು ಕಡಿಮೆ ಆಗುತ್ತವೆ. ನಾನಾ ಕಾರಣಗಳಿಂದ ಈ ಮೇಲಿನ ಆಂತರಿಕ ಚೋದನೆಯ ಉದ್ಭವ ಹಾಗೂ ಅದರ ಸಂವಹನೆಯ ಕ್ರಮ ತಪ್ಪಿ ಶೀಘ್ರವಾಗಿಯೇ ನರಗಳ ನಿಯಂತ್ರಣದಿಂದ ಪುನಃ ಸಕ್ರಮಗೊಳ್ಳಲಾರದೆ ಹೋದರೆ ತಾಳಗತಿ ವೈಪರೀತ್ಯಗಳು ಉಂಟಾಗುವುದು ಸಹಜ.

	ಕೆಲವೊಂದು ತಾಳಗತಿ ವೈಪರೀತ್ಯಗಳು ಅಪಾಯರಹಿತವಾಗಿರಬಹುದು. ಸಾಮಾನ್ಯವಾಗಿ ಎಲ್ಲ ಮಕ್ಕಳಲ್ಲೂ ಶ್ವಾಸಕ್ರಮಕ್ಕೆ ಅನುಸಾರವಾಗಿ ಕಂಡುಬರುವ ತಾಳಗತಿ ವೈಪರೀತ್ಯ ಈ ರೀತಿಯದು. ಉಸಿರು ಎಳೆದುಕೊಳ್ಳುವಾಗ ವೇಗದರದ ಮಿಡಿತ, ಉಸಿರು ಬಿಡುವಾಗ ಮಂದದರ ಮಿಡಿತವಿರುವ ಈ ಸ್ಥಿತಿಗೆ ಸೈನಸ್ ಎರಿದ್ಮಿಯ ಎಂದು ಹೆಸರು. ವೆನ್‍ಟ್ರಿಕ್ಯುಲರ್ ಫಿಬ್ರಿಲ್ಲೇಷನ್ ಎನ್ನುವುದು ಇನ್ನೊಂದು ವೈಪರೀತ್ಯ. ಇದು ಶೀಘ್ರಮಾರಕಸ್ಥಿತಿ. ಇವೆರಡು ಸ್ಥಿತಿಗಳ ನಡುವೆ ಬಹು ವಿಧವಾದ ನಿರ್ಬಾಧಿತ ಇಲ್ಲವೇ ಹೆಚ್ಚಾಗಿ ಅಥವಾ ಕಡಿಮೆಯಾಗಿ ಬಾಧೆಪಡಿಸುವ ಅನೇಕ ವೈಪರೀತ್ಯಗಳಿವೆ. ಕೆಲವು ವೇಳೆ ಮುಂದಿನಗುಂಡಿಗೆ ಮಿಡಿತ ನಿರೀಕ್ಷೆಗೆ ಮೊದಲೇ ಉಂಟಾಗುತ್ತದೆ. (ಪ್ರಿಮೆಚ್ಯೂರ್ ಸಿಸ್ಟೊಲೆ). ವಾಸ್ತವವಾಗಿ ಇದು ಒಂದು ಹೆಚ್ಚುವರಿ ಮಿಡಿತ. ಹೆಚ್ಚುವರಿ ಮಿಡಿತವಾದ ಬಳಿಕ ಮುಂದಿನ ಸ್ವಾಭಾವಿಕ ಮಿಡಿತ ಉಂಟಾಗಲು ಎರಡು ಸಹಜ ಮಿಡಿತಗಳ ನಡುವಿನ ಅಂತರಕಾಲಕ್ಕಿಂತಲೂ ಹೆಚ್ಚು ಕಾಲವಿರುತ್ತದೆ. ಕೆಲವು ವೇಳೆ ಹೆಚ್ಚುವರಿ ಮಿಡಿತ (ಎಕ್ಸ್‍ಟ್ರಾ ಸಿಸ್ಟೊಲೆ) ಬಲು ದುರ್ಬಲವಾಗಿದ್ದು ನಾಡಿಮಿಡಿತವನ್ನು ಉಂಟುಮಾಡದೇ ಇರಬಹುದು ; ಗುಂಡಿಗೆ ಮಿಡಿತ ಅನುಭವಕ್ಕೆ ಬರದೇ ಇರುವುಷ್ಟು ನಿರ್ಬಲವಾಗಿರಬಹುದು. ಈ ಸಂದರ್ಭಗಳಲ್ಲಿ ಗುಂಡಿಗೆಯ ಒಂದು ಮಿಡಿತ ತಪ್ಪಿಯೇ ಹೋಯಿತೇನೋ ಎನ್ನಿಸಬಹುದು. ವ್ಯಕ್ತಿಗೆ ಇದರ ಅರಿವು ಉಂಟಾಗದೆ ಬಲು ಗಾಬರಿ ಆಗಬಹುದಾದರೂ ಸಾಮಾನ್ಯವಾಗಿ ಇದು ಏನೂ ತೊಂದರೆ ಇಲ್ಲದ ಸ್ಥಿತಿ. ಅಲ್ಲದೆ ಅನೇಕರಲ್ಲಿ ಅನೇಕ ವೇಳೆ ಅರಿವಿಗೆ ಬರದೇ ಸಂಭವಿಸುತ್ತಿರುವ ಸ್ಥಿತಿ ಕೂಡ ಹೌದು. ಹೆಚ್ಚುವರಿ ಮಿಡಿತ ಸೈನೊಏಟ್ರಿಯಲ್ ಗಂಟಿನಲ್ಲೊ ಹೃತ್ಕರ್ಣ-ಹೃತ್ಕುಕ್ಷಿಗಂಟಿನಲ್ಲೊ ಅಥವಾ ಗುಂಡಿಗೆಯ ಇನ್ನಾವುದಾದರೂ ಭಾಗದಲ್ಲೊ ಉದ್ಭವಿಸಬಹುದು. ಸೈನೊಏಟ್ರಿಯಲ್ ಗಂಟಿನಲ್ಲಿ ಚೋದನೆಗಳ ಉದ್ಭವದ ದರ ಹೆಚ್ಚಾಗಿರಬಹುದು. ಇದಕ್ಕೆ ಸೈನಸ್-ಟ್ಯಾಕಿಕಾರ್ಡಿಯ ಎಂದೂ ಹೆಸರು. ಗುಂಡಿಗೆ ಮಿಡಿತ ಕ್ರಮಬದ್ಧವಾಗಿದ್ದರೂ (ರೆಗ್ಯುಲರ್) ದರ ಮಿನಿಟಿಗೆ 160ರಿಂದ 200ರವರೆಗೆ ಇರುತ್ತದೆ. ಗುಂಡಿಗೆಯಲ್ಲಿ ಬೇರೆ ಅಕ್ರಮವಿಲ್ಲದಿದ್ದರೆ ಕೇವಲ ಈ ಸ್ಥಿತಿಯಿಂದ ತೊಂದರೆ ಇಲ್ಲ. ಇದರ ಕಾರಣ ತಿಳಿಯದು. ಚಿಕಿತ್ಸೆಯೂ ಅಷ್ಟೆ. ಕೆಲವು ಸೆಕೆಂಡುಗಳಷ್ಟು ತಾತ್ಕಾಲಿಕವಾಗಿಯೂ ಒಂದೆರಡು ವಾರಗಳಷ್ಟು ದೀರ್ಘಕಾಲಿಕವಾಗಿಯೊ ಇರಬಹುದು. ಸ್ಥಿತಿ ಹೇಗೆ ಇದ್ದಕ್ಕಿದ್ದಂತೆ ಕಂಡುಬರುವುದೋ ಹಾಗೆಯೇ ಶಮನಗೊಳ್ಳುವುದೂ ಸಾಮಾನ್ಯ. ಇದಕ್ಕೆ ವಿಪರ್ಯಯವಾಗಿ ಸೈನೊಏಟ್ರಿಯಲ್ ಗಂಟಿನಿಂದ ಚೋದನೆ ಬಲು ಕಡಿಮೆ ದರದಲ್ಲಿ ಉದ್ಭವವಾಗಿ ಗುಂಡಿಗೆಮಿಡಿತ ಮಿನಿಟಿಗೆ ಸುಮಾರು 50 — 60 ಇರಬಹುದು. ಸೈನಸ್ ಬ್ರಾಡಿಕಾರ್ಡಿಯ ಎಂದು ಇದರ ಹೆಸರು. ಸೈನೊಏಟ್ರಿಯಲ್ ಗಂಟು ಸ್ಥಗಿತವಾಗಿದ್ದರೆ ಚೋದನೆ ಹೃತ್ಕರ್ಣ ಹೃತ್ಕುಕ್ಷಿ ಗಂಟಿನಿಂದಲೇ ಉದ್ಭವವಾಗಬಹುದು. ಈ ತಾಳಗತಿಯೂ ನಿಧಾನ. ಇದಕ್ಕೆ ಗಂಟಿನ ತಾಳ (ನೋಡಲ್ ರಿದ್ಮ್) ಎಂದು ಹೆಸರು.

	ಗುಂಡಿಗೆಯ ಮಿಡಿತ ಕ್ರಮಬದ್ಧವಾಗಿ ಆದರೆ ರಭಸದಿಂದ ಉಂಟಾಗುವುದು ಏಟ್ರಿಯಲ್ ಫ್ಲಟ್ಟರ್ ಎಂಬ ಸ್ಥಿತಿ. ಹೃತ್ಕರ್ಣ ಮಿನಿಟಿಗೆ ಸುಮಾರು 300  ಬಾರಿ ಮಿಡಿಯಬಹುದು. ಮಿನಿಟಿಗೆ ಇಷ್ಟು ಪ್ರಚೋದನೆಗಳು ಹೃತ್ಕರ್ಣ-ಹೃತ್ಕುಕ್ಷಿಗಂಟಿನ ಮೂಲಕ ಸಾಗುವುದು ಅಸಾಧ್ಯ. ಅದರ ಸಂವಹನಸಾಮಥ್ರ್ಯಕ್ಕೆ ಮೀರಿದ ಈ ಸ್ಥಿತಿಯಲ್ಲಿ ಪ್ರತಿ ಎರಡನೆಯ ಅಥವಾ ಮೂರನೆಯ ಪ್ರಚೋದನೆ ಮಾತ್ರ ಹೃತ್ಕುಕ್ಷಿಗಳನ್ನು ತಲಪಿ ಅವುಗಳ ಮಿಡಿತವನ್ನು ಉಂಟುಮಾಡುತ್ತದೆ. ಅಂದರೆ ಹೃತ್ಕರ್ಣ ಹೃತ್ಕುಕ್ಷಿಗಳ ಮಿಡಿತಗಳ ನಡುವೆ ಇರುವ ಅನುಪಾತ 2 : 1  ಅಥವಾ 3 : 1.  ಹೃತ್ಕರ್ಣಗಳ ಮಿಡಿತ 150 — 200 ಅಥವಾ ಇನ್ನೂ ಕಡಿಮೆಯೇ ಇದ್ದರೂ ಕೆಲವು ವೇಳೆ ಅದು ಕ್ರಮಬದ್ಧವಾಗಿರುವುದಿಲ್ಲ. ಸೈನಸ್ ಅರಿತ್ಮಿಯದಲ್ಲಿ ಅಕ್ರಮದಲ್ಲೂ ಒಂದು ಕ್ರಮ (ರೆಗ್ಯುಲರ್ಲಿ ಇರೆಗ್ಯುಲರ್) ಕಂಡುಬರುವುದು ವ್ಯಕ್ತ. ಆದರೆ ಮೇಲೆ ಹೇಳಿರುವ ಸ್ಥಿತಿಯಲ್ಲಿ ಮಿಡಿತ ಕೇವಲ ಅಕ್ರಮವಾಗಿಯೇ (ಇರೆಗ್ಯುಲರ್ಲಿ ಇರೆಗ್ಯುಲರ್) ಇರುತ್ತದೆ. ಈ ಸ್ಥಿತಿಗೆ ಏಟ್ರಿಯಲ್ ಫಿಬ್ರಿಲ್ಲೇಷನ್ ಎಂದು ಹೆಸರು. ಹೃತ್ಕರ್ಣದ ಮಿಡಿತವೇ ಕ್ರಮತಪ್ಪಿರುವುದರಿಂದ ಹಾಗೂ ಸಾಮಾನ್ಯವಾಗಿ ಹೃತ್ಕರ್ಣ- ಹೃತ್ಕುಕ್ಷಿಗಂಟಿನ ಸಂವಹನ ಸಾಮಥ್ರ್ಯಕ್ಕೆ ಮೀರಿದ ದರದಲ್ಲಿರುವ ಹೃತ್ಕುಕ್ಷಿಗಳೂ ಕ್ರಮ ತಪ್ಪಿಯೇ ಮತ್ತು ಮಂದಗತಿಯಿಂದಲೇ ಮಿಡಿಯುತ್ತವೆ. ಅಲ್ಲದೆ ಹೃತ್ಕರ್ಣ ಮಿಡಿತಗಳ ಹೃತ್ಕುಕ್ಷಿ ಮಿಡಿತಗಳ ದರಗಳಲ್ಲಿ ಯಾವ ಅನುಪಾತವೂ ಕಂಡುಬರುವುದಿಲ್ಲ. ಏಟ್ರಿಯಲ್ಲ ಫಿಬ್ರಿಲ್ಲೇಷನ್ ಇದ್ದಕ್ಕಿದ್ದಂತೆ ಕಂಡುಬರಬಹುದು. ಗುಂಡಿಗೆಯ ಇನ್ನಾವುದೋ ರೋಗದ ಮೇಲುಹೇರಾಗಿ (ಸೂಪರ್‍ಇಂಪೋಸ್ಡ್) ಕಂಡುಬರಬಹುದು. ವಾಸ್ತವವಾಗಿ ಗಂಡಾಂತರದ ರೋಗವಾದರೂ ಏಟ್ರಿಯಲ್ ಫಿಬ್ರಿಲ್ಲೇಷನ್ನಿನಿಂದ ಬಾಧಿತವಾಗಿರುವ ವ್ಯಕ್ತಿ ಚಿಕಿತ್ಸೆ ಇಲ್ಲದಿದ್ದರೂ ವರ್ಷಗಳ ಕಾಲ ಬದುಕಿರಬಹುದು. ಹೃತ್ಕರ್ಣದ ಈ ತತ್ತರಿಕೆಯನ್ನು ಔಷಧಿಗಳಿಂದ, ಕೆಲವೊಮ್ಮೆ ಶಸ್ತ್ರಕ್ರಿಯೆಯಿಂದ ಹೋಗಲಾಡಿಸಿಕೊಳ್ಳಬೇಕು.

	ಚೋದನೆಯ ಸಂವಹನೆಯ ದೋಷದಿಂದ ಹೃತ್ಕಕ್ಷಿಗಳ ಅರ್ಥಾತ್ ಗುಂಡಿಗೆಯ ಮಿಡಿತದಲ್ಲಿ ತಾಳಗತಿಯ ವೈಪರೀತ್ಯ ಕಂಡುಬರಬಹುದು. ಸಂವಹನೆ ಪೂರ್ಣವಾಗಿ ಸ್ಥಗಿತವಾಗಿದ್ದರೆ (ಕಂಪ್ಲೀಟ್ ಬ್ಲಾಕ್) ಹೃತ್ಕರ್ಣ ಹೃತ್ಕುಕ್ಷಿಗಳ ಮಿಡಿತಗಳು ಒಂದಕ್ಕೊಂದು ಸಂಬಂಧಪಡದೆ ಸ್ವೇಚ್ಛೆಯಾಗಿ ಏರ್ಪಟ್ಟಂತೆ ಇರುತ್ತವೆ. ಹೃತ್ಕರ್ಣಗಳು ಮಾಮೂಲಿನಂತೆ ಮಿನಿಟಿಗೆ 70  ಬಾರಿ ಕ್ರಮಬದ್ಧವಾಗಿ ಮಿಡಿಯುತ್ತಿದ್ದರೆ ಹೃತ್ಕುಕ್ಷಿಗಳು ಮಿನಿಟಿಗೆ ಸುಮಾರು 40  ಬಾರಿ ಕ್ರಮಬದ್ಧವಾಗಿಯೇ ಮಿಡಿಯುತ್ತವೆ. ಈ ಸಂದರ್ಭಗಳಲ್ಲಿ ಹೃತ್ಕುಕ್ಷಿಗಳ ಮಿಡಿತ ಸ್ವಯಂ ಪ್ರಚೋದಿತ. ಹಿಸ್‍ನÀ ಕಟ್ಟಿನ ಒಂದು ಕವಲಿನಲ್ಲಿ ಸಂವಹನೆ ಸ್ಥಗಿತವಾಗಿದ್ದರೆ ಅದಕ್ಕೆ ಮಾತ್ರ ಸಂಬಂಧಿಸಿದ ಹೃತ್ಕುಕ್ಷಿಯ ಮಿಡಿತದಲ್ಲಿ ತಾಳಗತಿಯ ವೈಪರೀತ್ಯ ಕಂಡುಬರುತ್ತದೆ. ಸಂವಹನೆಗೆ ಭಾಗಶಃ ಅಡಚಣೆ (ಪಾರ್ಶಿಯಲ್ ಬ್ಲಾಕ್) ಆಗಿರುವುದೂ ಉಂಟು. ಸ್ವಾಭಾವಿಕವಾಗಿಯೇ ಇಂಥ ಸಂದರ್ಭದಲ್ಲಿ ಹೃತ್ಕುಕ್ಷಿಗಳ ಮಿಡಿತ ಕೇವಲ ಕ್ರಮತಪ್ಪಿದಂತಿರುವುದು ವ್ಯಕ್ತ. ಮೇಲೆಯೇ ಹೇಳಿರುವ ವೆನ್‍ಟ್ರಿಕ್ಯುಲರ್ ಫಿಬ್ರಿಲ್ಲೇಷನ್ ಎಂಬ ಕ್ಷಿಪ್ರಮಾರಕಸ್ಥಿತಿಯಲ್ಲಿ ಹೃತ್ಕುಕ್ಷಿಗಳ ಮಿಡಿತಗಳು ತಾಳಗತಿಯ ಯಾವ ಸ್ವಾಭಾವಿಕ ನಿಯಂತ್ರಣಗಳಿಗೂ ಹೊರತಾಗಿರುವುದರಿಂದ ಬಹಳ ವೇಗದರದಲ್ಲಿ ಆದರೆ ದುರ್ಬಲವಾಗಿರುವುದರಿಂದ ಸಾರ್ಥಕವಿಲ್ಲದವಾಗಿ ಇರುತ್ತವೆ. ಸಂವಹನೆ ನಿಗದಿತ ದರದಲ್ಲಿ ಉದ್ಭ್ಬವವಾಗದೆ ಗತಿರೂಪಿಸುವ ಗಂಟು ಸೋಮಾರಿಯಾಗಿದ್ದರೆ ಅದನ್ನು ಬಡಿದೆಬ್ಬಿಸಲು ಮತ್ತು ತಂತಾನೆ ಆವೇಗಗಳನ್ನು ನೀಡಲು ಪೇಸ್ ಮೇಕರ್ ಅಳವಡಿಸಬೇಕಾಗುವುದು.					(ಎನ್.ಎಸ್.ಎಸ್.ಡಬ್ಲ್ಯೂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ